ತೇಗ್ ಬಹಾದ್ದೂರ್
1621 - 1675. ಸಿಕ್ಖರ ಒಂಬತ್ತನೆಯ ಗುರು (1664 - 75). ಆರನೆಯ ಗುರು ಹರಗೋವಿಂದ್ ಸಿಂಗನ ಮಗ. ಎಂಟನೆಯ ಗುರುಹರ್ ಕಿಶನ್ ಅನಂತರ ಗುರು ಪಟ್ಟಕ್ಕೆ ಬಂದ. ಆನಂದಪುರ ಈತನ ಕೇಂದ್ರಸ್ಥಳವಾಗಿತ್ತು.

ಅದು ಔರಂಗಜೇಬನ ಆಳ್ವಿಕೆಯ ಕಾಲವಾಗಿತ್ತು. ಇಸ್ಲಾಂ ಮತವನ್ನು ಒತ್ತಾಯದಿಂದ ಹಿಂದೂಗಳ ಮೇಲೆ ಹೇರುವುದರಲ್ಲಿ ಔರಂಗಜೇóಬ್ ನಿರತನಾಗಿದ್ದ. ಅನೇಕ ಗುರುದ್ವಾರಗಳನ್ನು ಕೆಡಿಸಿ ಮಸೀದಿಗಳನ್ನಾಗಿ ಮಾಡಲು ಅವನು ಉತ್ತೇಜಿಸಿದ. ಅನೇಕ ಗುರುದ್ವಾರಗಳನ್ನು ಕೆಡವಾಲಾಯಿತು. ಹಿಂದೂಗಳಲ್ಲೂ ಸಿಕ್ಖರಲ್ಲೂ ಅಸಮಾಧಾನ ಹೆಚ್ಚುತ್ತಿತ್ತು. ಆದರೆ ಅವರು ದೌರ್ಜನ್ಯವನ್ನೂ ನುಂಗಬೇಕಾಗಿತ್ತು. ಈ ಪರಿಸ್ಥಿತಿಯಲ್ಲಿ ತೇಗ್ ಬಹಾದ್ದೂರ್ ಸಿಕ್ಖರ ಮುಂದಾಳಾಗಿ, ಧರ್ಮದ ರಕ್ಷಣೆಗಾಗಿ ನಿಂತ. ಈತ ಪಂಜಾಬಿನ ವಿವಿಧ ಭಾಗಗಳಲ್ಲಿ ಜಾಗೃತಿಯುಂಟಾಗುವಂತೆ ಮಾಡಿದ. ಜಾಟರು ಇವನ ಬೆಂಬಲಕ್ಕೆ ನಿಂತರು. ಔರಂಗ್eóÉೀಬ್ ವಿಧಿಸಿದ ಕಟ್ಟಳೆಗಳನ್ನು ಮುರಿಯಲು ಅನೇಕ ಜನರನ್ನು ಈತ ಹುರಿದುಂಬಿಸಿದ. ಇವನ ಈ ಕೃತ್ಯಗಳನ್ನು ಕಂಡ ಔರಂಗಜೇಬ್ ಕ್ರುದ್ಧನಾಗಿ ತೇಗ್ ಬಹಾದ್ದೂರ್ ಮತ್ತು ಆತನ ಐವರು ಶಿಷ್ಯರನ್ನು ಬಂಧಿಸಿ ದೆಹಲಿಗೆ ಕರೆತಂದ. ಅವನನ್ನು ಇಸ್ಲಾಂ ಮತಕ್ಕೆ ಪರಿವರ್ತಿಸಲು ಬಾದಶಾಹ ಬಹಳ ಪ್ರಯತ್ನಿಸಿದ. ಗುರುವಿನ ಇಬ್ಬರು ಶಿಷ್ಯರನ್ನು ಅವನ ಇದಿರೇ ಕೊಲ್ಲಿಸಿದ. ತೇಗ್ ಬಹಾದ್ದೂರ್ ತನ್ನ ಧರ್ಮವನ್ನು ಬಿಡಲೊಪ್ಪಲಿಲ್ಲ. ಕೊನೆ 1675ರಲ್ಲಿ ನವೆಂಬರ್ 11ರಂದು ಆತನ ಶಿರಶ್ಛೇದ ಮಾಡಲಾಯಿತು.
(ಎಸ್.ಎಂ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ